Ravi Basrur Life Story : ಆ ಪುಣ್ಯಾತ್ಮನ ಹೆಸರೇ ರವಿ ಬಸ್ರೂರ್ – ಸಾಧನೆಯ ಹಿಂದಿನ ಕರುಣಾಜನಕ ಕಥೆಯಿದು!

ಕನ್ನಡ ಚಿತ್ರರಂಗದ ಬಹು ಪ್ರಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ (Ravi Basrur) ಅವರು ನಮಗೂ ನಿಮಗೆಲ್ಲಾ ಚಿರಪರಿಚಿತ. ಆದರೆ, ಅವರ ಹೆಸರಿನ ಪೂರ್ವಾರ್ದವಾದ ʼರವಿʼ ಹೆಸರಿನ ಬಗ್ಗೆ ನಿಮಗೆಷ್ಟು ಗೊತ್ತು? ಬಸ್ರೂರ್ ಅವರ ಮೊದಲ ಹೆಸರೇನು? ಅವರ ಈ ಸಾಧನೆಯ ಹಿಂದಿನ ಕಠಿಣ ಪರಿಶ್ರಮ ಇದುವರೆಗೂ ಯಾರಿಗೂ ತಿಳಿದಿರಲಿಲ್ಲ.

“ಉಗ್ರಂ” ಚಿತ್ರದ ಮ್ಯೂಸಿಕ್ ಮೂಲಕ ಕನ್ನಡಿಗರ ಮನಸ್ಸು ಗೆದ್ದು, “ಕೆಜಿಎಫ್” ಚಿತ್ರದ ಮ್ಯೂಸಿಕ್ ಮೂಲಕ ವಿಶ್ವವಿಖ್ಯಾತರಾಗಿರುವ ಬಸ್ರೂರ್ ನಮ್ಮೆಲ್ಲರ ಇಷ್ಟದ ಸಂಗೀತ ನಿರ್ದೇಶಕ. ಆದರೆ, ದೇವಸ್ಥಾನಗಳ ಚಿತ್ರಾನ್ನ, ಪುಳಿಯೋಗೆರೆಯನ್ನೇ ಸೇವಿಸಿ, ಕೆಲವೊಮ್ಮೆ ಉಪವಾಸವಿದ್ದೇ ಸಾಧನೆಗಾಗಿ ಶ್ರಮಿಸಿದ ಕಿರಣ್ ಬಸ್ರೂರ್ (Kiran Basrur) ಅವರ ಸಾಧನೆಯ, ಪರಿಶ್ರಮ ಹಿನ್ನೋಟವನ್ನೊಮ್ಮೆ ಮೆಲುಕು ಹಾಕೋಣ.

ಖ್ಯಾತ ಸಂಗೀತ ನಿರ್ದೇಶಕರಾಗಿರುವ ರವಿ ಬಸ್ರೂರ್ ಅವರು ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ತಾವಾಗಿಯೇ ತಮ್ಮ ಸಂಕಷ್ಟಗಳ ದಿನವನ್ನು ನೆನೆಯುವವರೆಗೆ, ತಮ್ಮ ಹೆಸರಿನ ಹಿಂದಿನ ರೋಚಕ ಕಥೆಯನ್ನು ಬಿಚ್ಚಿಡುವವರೆಗೆ ಯಾರಿಗೂ ಈ ಬಗ್ಗೆ ಕಿಂಚಿತ್ತೂ ಸುಳಿವಿರಲಿಲ್ಲ. ಖಾಸಗಿ ವಾಹಿನಿಯಲ್ಲಿ ಈ ಬಗ್ಗೆ ಮಾತನಾಡಿರುವ ರವಿ ಬಸ್ರೂರ್ (Ravi Basrur) ತಮ್ಮ ಸಾಧನೆಗೆ ನೆರವಾದ ಪುಣ್ಯಾತ್ಮನನ್ನೂ ಹಾಗೂ ತಮ್ಮ ಈ ಹಿಂದಿನ ಕರುಣಾಜನಕ ಕಥೆಯನ್ನೂ ತೆರೆಯ ಮುಂದೆ ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ರವಿ ಬಸ್ರೂರ್ ಅವರು ಮೊದಲ ಹೆಸರೇನು ಗೊತ್ತೇ?

ರವಿ ಬಸ್ರೂರ್ ಅವರ ಮೊದಲ/ನಿಜವಾದ ಹೆಸರು ಕಿರಣ್ ಬಸ್ರೂರು. ಹೌದು, ಇದು ಎಲ್ಲರೂ ಆಶ್ಚರ್ಯಚಕಿತರಾಗುವ ಸಮಯ. ರವಿ ಎನ್ನುವುದು ಅವರ ಹೆಸರಲ್ಲ. ಇದು ಅವರ ಸಾಧನೆಗೆ ಬೆಂಗಾವಲಾದವರ, ಸಾಧನೆಯೆಂಬ ಮುಳ್ಳು ಹಾದಿಯಲ್ಲಿ ಹೂವಾಗಿ ನಿಂತವರ, ಯಶಸ್ಸಿನ ಜೀವನಕ್ಕೆ ಸಾಕ್ಷಾತ್ ದೇವರ ಸ್ವರೂಪರಾದ ಪುಣ್ಯಾತ್ಮರೊಬ್ಬರ ಹೆಸರು.

ರವಿ ಬಸ್ರೂರ್ ಬಿಚ್ಚಿಟ್ಟ ಸಾಧನೆಯ ಹಿಂದಿನ ರೋಚಕ ಕಹಾನಿ ಹೀಗಿದೆ :

“ಜೀವನವೇ ಸಾಕೆಂದು ವೆಸ್ಟ್‌ ಆಫ್ ಕಾರ್ಡ್‌ ರೋಡ್‌ನಲ್ಲಿ ಕೂತಿದ್ದೆ. ಊಟ ಮಾಡದೇ ಮೂರ್ನಾಲ್ಕು ದಿನ ಆಗಿತ್ತು. ನನ್ನ ಜೇಬಿನಲ್ಲಿ ಒಂದು ಲಿಸ್ಟ್ ಯಾವಾಗಲೂ ನನ್ನ ಜತೆ ಇರುತ್ತಿತ್ತು. ಯಾವ ದೇವಸ್ಥಾನದಲ್ಲಿ ಯಾವ ದಿನ ಯಾವ ಪ್ರಸಾದ ಕೊಡ್ತಾರೆ ಅಂತ. ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ಪ್ರಸಾದ ಸಿಗುತ್ತಿರಲಿಲ್ಲ. ಆಗ ಒಬ್ಬರು ಹಿರಿಯರು ನನ್ನನ್ನು ನೋಡಿದರು. ಅವರ ಹೆಸರು ಕಾಮತ್. ಅವರು ನನ್ನನ್ನು ಕರೆದುಕೊಂಡು ಅವೆನ್ಯೂ ರೋಡ್‌ʼನ ಒಂದು ಅಂಗಡಿಗೆ ಕರೆದುಕೊಂಡು ಹೋಗಿ ಈತ ಹಿತ್ತಾಳೆ, ಬೆಳ್ಳಿ ಕೆಲಸ ಎಲ್ಲಾ ಮಾಡ್ತಾನೆ. ಆದರೆ, ಇವನಿಗೆ ಸಂಗೀತದ ಹುಚ್ಚು ಹಿಡಿದಿದೆ. ಅದಕ್ಕೆ ಕೆಲಸ ಮಾಡ್ತಿಲ್ಲ ಅಂತ ಒಬ್ಬ ವ್ಯಕ್ತಿ ಮುಂದೆ ಕೂರಿಸಿ ಹೇಳಿದರು. ನಾನು ಮೊದಲು 5 ರೂಪಾಯಿ ಕೊಡಿ ತಿನ್ಕೊಂಡು ಬರ್ತೀನಿ. ಆಮೇಲೆ ನೀವು ಹೇಳಿದ್ದು ನನ್ನ ತಲೆಗೆ ಹತ್ತುತ್ತದೆ ಎಂದೆ. ಚಿತ್ರಾನ್ನ ತಿಂದು ಬಂದು ಅವರ ಮುಂದೆ ಕುಳಿತುಕೊಂಡೆ.

ಆಗ ಅವ್ರು ನನ್ನನ್ನು ನೋಡಿ ಎಂತಹ ವ್ಯಕ್ತಿನ ಕರ್ಕೊಂಡು ಬಂದು ಕೂರಿಸಿದ್ದೀರಾ? ಈತನನ್ನು ನೋಡಲು, ಭೇಟಿ ಮಾಡಲು 5 ತಿಂಗಳು ಅಪಾಯಿಂಟ್‌ಮೆಂಟ್ ಬೇಕು. ಆ ರೀತಿ ಬೆಳೆಯುತ್ತಾನೆ ಎಂದರು. ಆಗ ನಾನು ಉದಾಸೀನದಿಂದಲೇ ಜಾತಕ ನೋಡಿ ಈ ರೀತಿ ಹೇಳುವವರು ಬಹಳ ಸಿಗ್ತಾರೆ. ನನಗೆ ಮ್ಯೂಸಿಕ್ ಬೇಕು ಅಷ್ಟೆ ಎಂದೆ. ಆಗ ಆ ಮನುಷ್ಯ ನಿಮಗೆ ಏನು ಬೇಕು ಎಂದು ಕೇಳಿದರು. ನಾನು ಕೀಬೋರ್ಡ್ ತಗೋಬೇಕು, ದುಡ್ಡು ಕೊಡ್ತೀರಾ? ಎಂದೆ. ಕೂಡಲೇ 35 ಸಾವಿರ ರೂ. ಕೊಟ್ಟು ಕೀಬೋರ್ಡ್ ತಗೋ ಎಂದರು. ಅವರು ಯಾರು ಅಂತಲೂ ನನಗೆ ಗೊತ್ತಿರಲಿಲ್ಲ. ನಾನು, ಕಾಮತ್ ಇಬ್ಬರೂ ಶಾಕ್ ಆಗಿದ್ದೆವು. ಆ ವ್ಯಕ್ತಿಯ ಹೆಸರೇ ರವಿ. ಅವರು ನನ್ನ ಜೀವನದಲ್ಲಿ ಬೆಳಕಾದರು. ಅಂದಿನಿಂದ ನನ್ನ ಹೆಸರು ಡಿಲೀಟ್ ಮಾಡಿ, ಅವರ ಹೆಸರನ್ನು ನನ್ನ ಹುಟ್ಟೂರಿನ ಹೆಸರಿನೊಂದಿಗೆ ಸೇರಿಸಿ ಇಟ್ಟುಕೊಂಡಿದ್ದೇನೆ. ನಾನು ಇವತ್ತು ಏನೇ ಸಾಧಿಸಿದ್ದರು ಅದಕ್ಕೆ ಅವರೇ ಕಾರಣರಾಗಿದ್ದಾರೆ. ನನ್ನ ಸಾಧನೆಯ ಎಲ್ಲಾ ಕ್ರೆಡಿಟ್‌ ಅವರಿಗೇ ಸಲ್ಲಬೇಕು. ನನ್ನ ನಿಜವಾದ ಹೆಸರು ಕಿರಣ್ ಎಂದು ಹೇಳಿದ್ದಾರೆ.

ರವಿ ಬಸ್ರೂರು (Ravi Basrur) ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಪ್ರೇಕ್ಷಕರು ರವಿ ಬಸ್ರೂರ್‌ ಅವರು ಸಂಕಷ್ಟದ ದಿನಗಳ ಬಗ್ಗೆ ಮರುಗುತ್ತಾ, ಅವರ ಸಾಧನೆಯ ಹಠಕ್ಕೆ ಹಾಗೂ ತಮ್ಮ ಸಾಧನೆಗೆ ನೆರವಾದವರಿಗೆ ರವಿ ಬಸ್ರೂರ್‌ ನೀಡಿದ ಜೀವಮಾನದ ಕೊಡುಗೆಗೆ ಶಹಬ್ಬಾಶ್‌ ಹೇಳುತ್ತಿದ್ದಾರೆ.

ಇಂದಿನ ದಿನಗಳಲ್ಲಿ ಸಹಾಯ ಮಾಡಿದವರಿಗೆ ಕೃತಜ್ಞರಾಗಿರುವವರ ಪ್ರಮಾಣ ಶೂನ್ಯಕ್ಕೆ ಹತ್ತಿರವಾಗಿದೆ. ಇಂತಹ ಸಮಯದಲ್ಲಿಯೂ ತಮಗೆ ನೆರವಾದ ವ್ಯಕ್ತಿಯ ಹೆಸರನ್ನೇ ತಾವಿಟ್ಟುಕೊಂಡು, ಅವರಿಗೆ ಗೌರವ ಸಲ್ಲಿಸುವುದು ಇದೆಯಲ್ಲ ನಿಜಕ್ಕೂ ಕರಕಷ್ಟ. ಆದಾಗ್ಯೂ, ಈ ಅಪ್ರತಿಮ ಕೆಲಸ ಮಾಡಿರುವ ರವಿ (ಕಿರಣ್) ಬಸ್ರೂರ್ (Kiran Basrur) ಅವರಿಗೆ ಮೆಚ್ಚುಗೆ ಸೂಚಿಸಲೇಬೇಕು. ಇಂತಹ ರವಿಯ ಕಿರಣಗಳ ಮೂಲಕವಾದರೂ ನಿಜ ಪ್ರತಿಭೆಗಳು ಸದಾ ಮಿನುಗುತ್ತಿರಬೇಕು. ಸಾಧನೆಯ ಹಂಬಲವಿರುವವರಿಗೆ ಸ್ಪೂರ್ತಿಯ ಚಿಲುಮೆಯಾಗಬೇಕು ಎನ್ನುವುದೇ ನಮ್ಮ ಆಶಯ.

You might also like
Leave A Reply

Your email address will not be published.