BBK Season 10 : ಹತ್ತಿರವಿದ್ದು ಹೇಸಿಗೆ ಆಗ್ತಿಯಾ? ಭವಿಷ್ಯ ಕೇಳಿ ದಂಗಾದ ಡ್ರೋನ್ ಪ್ರತಾಪ್

ಬಿಗ್ಬಾಸ್ (BBK Season 10) ಮನೆಯ ಸ್ಪರ್ಧಿಗಳಿಗೆ ಹೊಸ ವರ್ಷದ ಹೊಸ್ತಿಲಲ್ಲಿ ಮಹಾಗುರುಗಳ ಆಶೀರ್ವಾದ ಹಾಗೂ ಭವಿಷ್ಯ ವಾಣಿಯ ನುಡಿಗಳು ಸಿಕ್ಕಿವೆ. ಕೆಲ ಅಭ್ಯರ್ಥಿಗಳಿಗೆ 2024 ಶುಭವನ್ನು, ಜೊತೆಗಾರರನ್ನೂ ತಂದು ಕೊಟ್ಟರೆ ಮತ್ತೊಬ್ಬರಿಗೆ ಕುಟುಂಬದಿಂದಲೇ ದೂರವಿರುವಂತಹ ಸಂಕಷ್ಟವನ್ನು ತಂದೊಡ್ಡಿದೆ. ಬಿಗ್ ಬಾಸ್ ಮನೆ ಪ್ರವೇಶಿಸಿರುವ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿಗಳು ಮನೆಯ ಸರ್ವ ಸದಸ್ಯರ ಭವಿಷ್ಯ ಬಿಚ್ಚಿಟ್ಟಿದ್ದಾರೆ.

ಜನವರಿ 2 ಮಂಗಳವಾರದಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋ ಬಿಗ್ ಬಾಸ್ (BBK Season 10) ಪ್ರೇಮಿಗಳಲ್ಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಬಿಗ್ಬಾಸ್ ಮನೆಯೊಳಗೆ ಪೂಜೆ ಮಾಡಿ ಮಂಗಳಾರತಿ ಪ್ರಸಾದ ನೀಡಿದ ಸ್ವಾಮೀಜಿ ಎಲ್ಲ ಸ್ಪರ್ಧಿಗಳನ್ನೂ ಪ್ರತ್ಯೇಕವಾಗಿ ಕರೆದು ಅವರ ಬದುಕಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅವರ ಬಗ್ಗೆ ಭವಿಷ್ಯ ನುಡಿದಿರುವ ಸ್ವಾಮೀಜಿಗಳು, ಡ್ರೋನ್ ಪ್ರತಾಪ್ (Drone Prathap) ಮನಸ್ಸಿನಲ್ಲಿ ದಿಕ್ಕು-ದೆಶೆಗಳನ್ನೇ ಬದಲಾಯಿಸಿ ಸುಂಟರಗಾಳಿಯನ್ನು ಹಬ್ಬಿಸಿರುವಂತೆ ಈ ಪ್ರೋಮೋದಲ್ಲಿ ಕಾಣಿಸುತ್ತಿದೆ.

ಡ್ರೋನ್ ಪ್ರತಾಪ್ ಭವಿಷ್ಯವೇನು?


ಪ್ರತಾಪ್ (Drone Prathap) ಅವರಿಗೆ ಸಂಕಟಪಡುವಂಥ ಭವಿಷ್ಯ ನುಡಿದಿರುವ ಶ್ರೀಗಳು, ‘ಈ ವಿಚಾರ ಹೇಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ, ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು’ ಎಂದು ಖಡಕ್ಕಾಗಿ ಹೇಳಿದ್ದಾರೆ. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿದೆ.

ವರ್ತೂರು ಸಂತೋಷ್ (Varthur Santhosh) ಅವರನ್ನು ಕರೆದು, ‘ನೀವು ಕಾಲಿನ ಮೇಲೆ ಹಾಕಿಸಿಕೊಳ್ಳದ ಜಾಗದಲ್ಲಿ ಟ್ಯಾಟೋ ಒಂದಿದೆ. ಹಾಕಿಸಿಕೊಂಡು ಬಂದ ದಿನದಿಂದಲೇ ನೆಮ್ಮದಿ ಹೋಯ್ತು’ ಎಂದು ಹೇಳಿದ್ದಾರೆ. ಅದನ್ನು ವರ್ತೂರು ಒಪ್ಪಿಕೊಂಡಿದ್ದಾರೆ ಕೂಡ. ನಮ್ರತಾ ಅವರ ಬಳಿ, ‘ನಿಮ್ಮ ಜೀವನದಲ್ಲಿ ಹೊಸ ಬೆಳಕು, ಹೊಸ ವ್ಯಕ್ತಿಯ ಆಗಮನವಾಗುತ್ತಿದೆ’ ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ನಮ್ರತಾ ಅವರ ಮುಖದಲ್ಲಿ ನಗುವರಳಿದೆ.

ಈ ಮೂರು ಜನರ ಭವಿಷ್ಯದ ನುಡಿಗಳನ್ನು ವಾಹಿನಿ ಪ್ರಸಾರ ಮಾಡಿದ್ದು, ಪೂರ್ಣ ಮಾಹಿತಿಗಾಗಿ ಪ್ರೇಕ್ಷಕರಲ್ಲಿ ಕುತೂಹಲದ ಕಟ್ಟೆಯನ್ನು ಕಟ್ಟಲಾಗಿದೆ. ಉಳಿದ ಬಿಗ್ ಬಾಸ್ (BBK Season 10) ಸ್ಪರ್ಧಿಗಳ ಹಣೆಬರಹದಲ್ಲಿ ಏನು ಬರೆದಿದೆ? ಅವರ ಮಾತುಗಳು ಮನೆಯೊಳಗಿನ ಸಮತೋಲವನ್ನು ಹದಗೆಡಿಸುತ್ತದೆಯೇ? ಎಂದು ಇಂದಿನ ಸಂಚಿಕೆಯಲ್ಲಿಯೇ ಉತ್ತರ ದೊರಕಲಿದೆ.

You might also like
Leave A Reply

Your email address will not be published.