ಪ್ರಭು ಶ್ರೀರಾಮನ ವಂಶವೃಕ್ಷದ ಬಗ್ಗೆ ನಿಮಗೆಷ್ಟು ಗೊತ್ತು?

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಉದ್ಘಾಟನೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಮಂದಿರದ ನಿರ್ಮಾಣಕ್ಕಾಗಿ ನೂರಾರು ವರ್ಷಗಳಿಂದ ಸತತವಾಗಿ ‌ಕಾನೂನಾತ್ಮಕ ಹೋರಾಟಗಳು ನಡೆದ ಬಳಿಕ ಈ ದೇಶದ ಪರಮೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟಿನ ತೀರ್ಪಿನ ನಂತರವೇ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾದದ್ದು ಹಿಂದೂಗಳ ಸಹಿಷ್ಣುತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಸಂಧರ್ಭದಲ್ಲಿ ಪ್ರಭು ಶ್ರೀರಾಮನ ವಂಶ ವೃಕ್ಷದ ಬಗ್ಗೆ ನಿಮಗೆಷ್ಟು ಗೊತ್ತು? ನೋಡೋಣ ಬನ್ನಿ.

ತ್ರೇತಾಯುಗದಲ್ಲಿ ವಿಷ್ಣುವಿನ ಏಳನೇ ಅವತಾರವಾದ ಶ್ರೀ ರಾಮನ ರೂಪದಲ್ಲಿ ಧರೆಗಿಳಿದ ಭಗವಂತನು ರಾಜ ದಶರಥ ಮತ್ತು ತಾಯಿ ಕೌಸಲ್ಯೆಯ ಮಗನಾಗಿ ಅಯೋಧ್ಯೆಯಲ್ಲಿ ಜನಿಸುತ್ತಾನೆ. ಹಾಗಾದರೆ ಪ್ರಭು ಶ್ರೀ ರಾಮನ ವಂಶದ ಶುರುವಾತು ಎಲ್ಲಿಂದ ಎಂಬುದಕ್ಕೆ ಉತ್ತರ ಇಲ್ಲಿದೆ.

ಪ್ರಭು ಶ್ರೀರಾಮನ ವಂಶ, ಇಕ್ಷ್ವಾಕು ವಂಶದ ಆರಂಭ ಸ್ವತಃ ಪ್ರಭು ಶ್ರೀರಾಮನಿಂದಲೇ ಆರಂಭವಾಗಿದೆ ಅಂದರೆ ಶ್ರೀ ರಾಮನ ಮೂಲರೂಪ ಶ್ರೀ ಹರಿಯಿಂದಲೇ ಆರಂಭವಾಗಿದೆ.

ಶ್ರೀ ಹರಿಯ ಮಗ ಬ್ರಹ್ಮದೇವರು, ಬ್ರಹ್ಮ ದೇವರ ಮಗ ಮರೀಚಿ, ಮರೀಚಿಯ ಮಗ ಕಾಶ್ಯಪ, ಕಾಶ್ಯಪರ ಮಗ ಸೂರ್ಯ, ಸೂರ್ಯನ ಮಗ ಮನು, ಮನುವಿನ ಮಗು ಇಕ್ಷ್ವಾಕು.

ಇಕ್ಷ್ವಾಕುವಿನ ಮಗ ಕುಕ್ಷಿ, ಕುಕ್ಷಿಯ ಮಗ ವಿಕುಕ್ಷಿ, ವಿಕುಕ್ಷಿಯ ಮಗ ಬಾಣ, ಬಾಣನ ಮಗ ಅನರಣ್ಯ, ಅನರಣ್ಯನ‌ ಮಗ ಪೃಥು, ಪೃಥುವಿನ‌ ಮಗ ತ್ರಿಶಂಕು, ತ್ರಿಶಂಕುವಿನ ಮಗ ದುಂಧುಮಾರ. (ಯುವನಾಶ್ವ), ದುಂಧುಮಾರುವಿನ ಮಗ ಮಾಂಧಾತ, ಮಾಂಧಾತುವಿನ ಮಗ ಸುಸಂಧಿ, ಸುಸಂಧಿಯ ಮಗ ಧೃವಸಂಧಿ, ಧೃವಸಂಧಿಯ ಮಗ ಭರತ.

ಭರತನ ಮಗ ಅಶೀತಿ, అಶೀತಿಯ ಮಗ ಸಗರ, ಸಗರನ ಮಗ ಅಸಮಂಜಸ, ಅಸಮಂಜಸನ ಮಗ ಅಂಶುಮಂತ, ಅಂಶುಮಂತನ ಮಗ ದಿಲೀಪ, ದಿಲೀಪನ ಮಗ ಭಗೀರಥ, ಭಗೀರಥನ ಮಗ ಕಕುತ್ಸು.

ಕಕುತ್ಸುವಿನ ಮಗ ರಘು, ರಘುವಿನ ಮಗ ಪ್ರವುರ್ಧ, ಪ್ರವುರ್ಧನ ಮಗ ಶಂಖನು, ಶಂಖನುವಿನ ಮಗ ಸುದರ್ಶನ, ಸುದರ್ಶನನ ಮಗ ಅಗ್ನಿವರ್ಣ.

ಅಗ್ನಿವರ್ಣನ ಮಗ ಶೀಘ್ರವೇದ, ಶೀಘ್ರವೇದನ ಮಗ ಮರು, ಮರುವಿನ ಮಗ ಪ್ರಶಿಷ್ಯಕ, ಪ್ರಶಿಷ್ಯಕನ ಮಗ ಅಂಬರೀಶ, ಅಂಬರೀಶನ ಮಗ ನಹುಶ, ನಹುಶನ ಮಗ ಯಯಾತಿ, ಯಯಾತಿಯ ಮಗ ನಾಭಾಗ, ನಾಭಾಗನ ಮಗ ಅಜನ, ಅಜನ ಮಗ ದಶರಥ, ದಶರಥನ‌ ಮಗ ಪ್ರಭು ಶ್ರೀರಾಮ.

ಶ್ರೀ ರಾಮನಿಗೆ ಲವ-ಕುಶರೀರ್ವರು ಮಕ್ಕಳು, ಭರತನಿಗೆ ತಕ್ಷ-ಪುಷ್ಕಲರು, ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು, ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು,

Valmiki trains Lava and Kusha
Valmiki trains Lava and Kusha

ಮಕ್ಕಳಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳಿದರೆ, ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ, ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು.

ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ, ಅವನಿಂದ ನಿಷಧ, ನಭ, ಪುಂಡರೀಕ, ಕ್ಷೇಮಧನ್ವಾ, ದೇವಾನೀಕ, ಅನೀಹ, ಪಾರಿಯಾತ್ರ ಬಲಸ್ಥಲ, ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ. ವೃಜನಾಭನ ಮಗ ಖಗಣ, ಖಗಣನ ಮಗ ವಿಧೃತಿ, ಅವನ ಮಗ ಹಿರಣ್ಯನಾಭ, ಹಿರಣ್ಯನಾಭನ ಮಗ ಪುಷ್ಯ, ಪುಷ್ಯನ‌ ಮಗ ಧ್ರುವಸಂಧಿ, ಧ್ರುವಸಂಧಿಯ‌ ಮಗ ಸುದರ್ಶನ, ಅವನ ಮಗ ಅಗ್ನಿವರ್ಣ, ಅಗ್ನಿವರ್ಣನ‌ ಮಗ ಶೀಘ್ರ.

ಶೀಘ್ರನ‌ ಮಗ ಮರು (ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದ. ಈಗಲೂ ಈ ಮರು ಮಹಾರಾಜನು ಕಲಾಪವೆಂಬ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಷ್ಟವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ ಎಂಬ ನಂಬಿಕೆಯಿದೆ). ಮರುವಿನ ಮಗ ಪ್ರಸುಶ್ರುತ ಸಂಧಿ, ಅವನ‌ ಮಗ ಅಮರ್ಷಣ, ಅವನ‌ ಮಗ ಮಹಸ್ವಂತ, ಮಹಸ್ವಂತನ‌ ಮಗ ವಿಶ್ವಸಾಹ್ವ, ಅವನ‌ ಮಗ ಪ್ರಸೇನಜಿತ್, ಪ್ರಸೇನಜಿತ್‌ನ ಮಗ ತಕ್ಷಕ, ತಕ್ಷಕನ ಮಗ ಬೃಹದ್ಬಲ, ಬೃಹದ್ಬಲನ ಮಗ ಬೃಹದ್ರಣ, ಅವನ‌ ಮಗ ಉರುಕ್ರಿ, ಉರುಕ್ರಿಯ ಮಗ ವತ್ಸವೃದ್ಧ, ಅವನ ‌ಮಗ ಪ್ರತಿವ್ಯೋಮ, ಭಾನು, ಭಾನುವಿನ ಮಗ ದಿವಾಕ, ದಿವಾಕನ ಮಗ ಸಹದೇವ, ಬೃಹದಶ್ವ, ಭಾನುಮಂತ, ಭಾನುಮಂತನ‌ ಮಗ ಪ್ರತೀಕಾಶ್ವ, ಸುಪ್ರತೀಕ, ಮರುದೇವ, ಮರುದೇವನ‌ ಮಗ ಸುನಕ್ಷತ್ರ, ಅವನ‌ ಮಗ ಪುಷ್ಕರ, ಅಂತರಿಕ್ಷ, ಸುತಪಸ, ಅವನ‌ ಮಗ ಅಮಿತ್ರಜಿತ್, ಬೃಹದ್ರಾಜ, ಬರ್ಹಿ, ಅವನ‌ ಮಗ ಕೃತಂಜಯ.

ಕೃತಮಜಯನ ಮಗ ರಣಂಜಯ, ಅವನ‌ ಮಗ ಸಂಜಯ, ಸಂಜಯನ ಮಗ ಶಾಕ್ಯ, ಶುದ್ಧೋದ, ಲಾಂಗಲ, ಪ್ರಸೇನಜಿತ್, ಕ್ಷುದ್ರಕ, ರಣಕ, ಸುರಥ.

ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ ಹುಟ್ಟಿದನು. ಸುಮಿತ್ರನ ನಂತರ ಕಲಿಯುಗದಲ್ಲಿ ಈ ಇಕ್ಷ್ವಾಕು ವಂಶವು ಕಾಲಕ್ರಮೇಣ ಮರೆಯಾಯಿತು.

ಇದು ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ಪ್ರಭುವಿನ ವಂಶವೃಕ್ಷ.

You might also like
Leave A Reply

Your email address will not be published.