Fastag ಬದಲಿಗೆ GPS ಆಧರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಪಾವತಿಗಾಗಿ ಪ್ರಸ್ತುತ ಜಾರಿಯಲ್ಲಿರುವ Fastag ಬದಲಾಗಿ GPS ಆಧಾರಿತ ಟೋಲ್ ಸಂಗ್ರಹ (GPS Based Toll Collection) ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದ್ದು, 2024ರ ಮಾರ್ಚ್ ಒಳಗಾಗಿ GPS ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯು ಜಾರಿಯಾಗುವುದು ಬಹುತೇಕ ಖಚಿತವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.

GPS ಆಧಾರಿತ ಟೋಲ್ ಸಂಗ್ರಹವು ಸರಳ ಮತ್ತು ತ್ವರಿತ ಪ್ರಕ್ರಿಯೆಯೊಂದಿಗೆ ವಾಹನ ಮಾಲೀಕರಿಗೆ ತಡೆರಹಿತ ಪ್ರಯಾಣಕ್ಕೆ ಸಹಕಾರಿಯಾಗುತ್ತದೆ. ಅಲ್ಲದೆ ಪ್ರಸ್ತುತ ಜಾರಿಯಲ್ಲಿರುವ ಶುಲ್ಕ ಸಂಗ್ರಹ ವಿಧಾನವನ್ನು ಮತ್ತಷ್ಟು ಸರಳಗೊಳಿಸುತ್ತದೆಂಬ ನಿರೀಕ್ಷೆಯು ಇದೆ ಎಂದು ತಿಳಿಸಿದರು.

2018-19ರಲ್ಲಿ ಟೋಲ್ ಪ್ಲಾಜಾದಲ್ಲಿ ವಾಹನಗಳು ಶುಲ್ಕ ಪಾವತಿಸಲು ಸರಾಸರಿ 8 ನಿಮಿಷ ಕಾಯಬೇಕಿದ್ದ ಪರಿಸ್ಥಿತಿಯನ್ನು Fastag ಸೌಲಭ್ಯದ ಮೂಲಕ 2020-21 ಮತ್ತು 2021-22ರ ಅವಧಿಯಲ್ಲಿ ಸರಾಸರಿ ಕಾಯುವ ಸಮಯವನ್ನು 47 ಸೆಕೆಂಡುಗಳಿಗೆ ಇಳಿಸಲಾಗಿತ್ತು. ಇದೀಗ GPS ಆಧಾರಿತ ಹೆದ್ದಾರಿ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಜಾರಿಯಲ್ಲಿರುವ Fastag ಸೌಲಭ್ಯವು ಒಂದು ಟೋಲ್ ಪ್ಲಾಜಾದಿಂದ ಮತ್ತೊಂದು ಪ್ಲಾಜಾದವರೆಗೆ ಸಂಪೂರ್ಣ ಟೋಲ್ ಸಂಗ್ರಹಿಸಲಾಗುತ್ತದೆ. ಒಂದು ವಾಹನವು ಸಂಪೂರ್ಣ ದೂರವನ್ನು ಪ್ರಯಾಣಿಸದೆ ಬೇರೆ ಸ್ಥಳದಲ್ಲಿ ಪ್ರಯಾಣವನ್ನು ಮುಗಿಸಿದರೂ ಸಹ ಟೋಲ್ ಅನ್ನು ಸಂಪೂರ್ಣವಾಗಿ ಪಾವತಿಸಬೇಕಾಗುತ್ತಿತ್ತು. ಇದರಿಂದ ವಾಹನ ಮಾಲೀಕರಿಗೆ ಹೊರೆಯಾಗುತ್ತಿತ್ತು.

ಆದರೆ ಹೊಸ ಶುಲ್ಕ ಪಾವತಿ ವಿಧಾನವು ಹೆದ್ದಾರಿ ಪ್ರವೇಶ ಮತ್ತು ನಿರ್ಗಮಿಸುವ ಸ್ಥಳದ ನಡುವಿನ ಅಂತರದ ಮೇಲೆ ಟೋಲ್ ವಿಧಿಸುವುದು ವಾಹನ ಮಾಲೀಕರಿಗೆ ಅನುಕೂಲಕವಾಗಲಿದೆ ಎಂದು ಮಾಹಿತಿ ನೀಡಿದರು.

ಈ ಹೊಸ ಸೌಲಭ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ?

1. GPS ಆಧಾರಿತ ಟೋಲ್ ಸಂಗ್ರಹ ಸೌಲಭ್ಯಕ್ಕಾಗಿ ಟ್ರ್ಯಾಕ್ ಮಾಡುವ ಸಾಧನವನ್ನು ಪ್ರತಿ ವಾಹನಗಳಲ್ಲೂ ಅಳವಡಿಸಬೇಕಿದ್ದು, ಈ ಸಾಧನವು ಮುಖ್ಯ ಶುಲ್ಕ ಸಂಗ್ರಹ ಸಾಧನದೊಂದಿಗೆ ಸಂಪರ್ಕಗೊಳ್ಳುವ ಮೂಲಕ ಟ್ರ್ಯಾಕ್ ಮಾಡುತ್ತದೆ.
2. ಇದು ಸುಂಕ ಪಾವತಿಸಬೇಕಾದ ಹೆದ್ದಾರಿ ಪ್ರವೇಶ ಮತ್ತು ನಿರ್ಗಮಿಸುವ ಸ್ಥಳದ ನಡುವಿನ ಅಂತರವನ್ನು ಲೆಕ್ಕ ಹಾಕುವ ಮೂಲಕ ಟೋಲ್ ವಿಧಿಸುತ್ತದೆ.
3. ಹೆದ್ದಾರಿ ಪ್ರವೇಶ ಮತ್ತು ನಿರ್ಗಮಿಸುವ ಸ್ಥಳಗಳಲ್ಲಿ ಹೆದ್ದಾರಿ ಪ್ರಾಧಿಕಾರವು ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಅಳವಡಿಸಲಿದ್ದು, ಪ್ರತಿ ವಾಹನದ ಡೇಟಾವನ್ನು ಸಂಗ್ರಹಿಸಿ ಸಂಬಂಧಿತ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಶುಲ್ಕ ಕಡಿತ ಮಾಡುತ್ತದೆ.

You might also like
Leave A Reply

Your email address will not be published.