ವಾಲ್ಮೀಕಿ ರಾಮಾಯಣದ ಕುರಿತು ನಿಮಗೆಷ್ಟು ತಿಳಿದಿದೆ? – ಈ ವರದಿ ಓದಿ

ಭಾರತ ದೇಶದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣವು ಹಿಂದೂ ಧರ್ಮದ ಪವಿತ್ರ ಗ್ರಂಥವೂ ಹೌದು! ನಮ್ಮ ದೇಶದಲ್ಲೇ ಸಂಸ್ಕೃತ ಮತ್ತು ಇತರ ಪ್ರಾದೇಶಿಕ ಭಾಷೆಗಳನ್ನು ಒಟ್ಟುಗೂಡಿಸಿದರೆ ಸುಮಾರು 300ಕ್ಕೂ ಹೆಚ್ಚು ರಾಮಾಯಣಗಳು ದೊರೆಯುತ್ತವೆ. ಹೀಗಿರುವಾಗ ವಿದೇಶದಲ್ಲಿರುವ ರಾಮಾಯಣಗಳನ್ನು ಒಟ್ಟುಗೂಡಿಸಿದರೆ ಯಾವ ರಾಮಾಯಣವನ್ನು ಓದಬೇಕು? ಯಾವುದು ಸತ್ಯ-ಮಿಥ್ಯವೆಂಬ ನಾನಾ ಪ್ರಶ್ನೆಗಳು ಹುಟ್ಟುವುದು ಸಹಜ.

ದೇಶ-ವಿದೇಶಗಳಲ್ಲಿ 300ಕ್ಕೂ ಹೆಚ್ಚು ರಾಮಾಯಣಗಳು ಬರೆಯಲ್ಪಟ್ಟರೂ, ಅದರಲ್ಲಿರುವ ಸ್ವಾರಸ್ಯ ಮಾತ್ರ ಒಂದೇ ಆಗಿದೆ. ಇದರಲ್ಲಿ ಮಹರ್ಷಿ ವಾಲ್ಮೀಕಿ ರಚಿಸಿದ ಕೃತಿಯೇ ಮೂಲ ರಾಮಾಯಣವಾದ್ದರಿಂದ ಭಾರತವಲ್ಲದೇ ಪ್ರಪಂಚದ ಎಲ್ಲ ರಾಮಾಯಣಗಳ ಪೈಕಿ ಇಂದಿಗೂ “ವಾಲ್ಮೀಕಿ ರಾಮಾಯಣ”ಕ್ಕೆ ಮಹತ್ತರ ಸ್ಥಾನವಿದೆ. ಇದರ ಜೊತೆಗೆ ತುಳಸಿದಾಸರ “ರಾಮಚರಿತಮಾನಸ”ಕ್ಕೂ ಪ್ರಮುಖ ಸ್ಥಾನಮಾನವನ್ನು ನೀಡಲಾಗಿದೆ.

ಪ್ರಸ್ತುತತೆಗೆ ಅನುಗುಣುವಾಗಿ ವಾಲ್ಮೀಕಿ ರಾಮಾಯಣವನ್ನು ಬರೆಯುವ ಮೊದಲೇ ಹನುಮನು ರಾಮನ ಕುರಿತು ಬಂಡೆ ಕಲ್ಲಿನ ಮೇಲೆ ಕೆತ್ತಿದನಂತೆ. ಇದನ್ನು “ಹನುಮಾನ್ ನಾಟಕ” ಎಂದು ಕರೆಯಲಾಗುತ್ತದೆ. ನಂತರ ಹನುಮಂತನು ಈ ಬೃಹದಾಕಾರದ ಬಂಡೆಯನ್ನು ವಾಲ್ಮೀಕಿಯ ಮುಂದೆಯೇ ಸಮುದ್ರಕ್ಕೆ ಎಸೆದನೆಂದು ಹೇಳಲಾಗುತ್ತದೆ.

ಮಹರ್ಷಿ ವಾಲ್ಮೀಕಿ ತಮ್ಮ ಜೀವಿತಾವಧಿಯಲ್ಲಿ ರಾಮಾಯಣದ ಘಟನೆಗಳನ್ನು ಕಣ್ಣಾರೆ ಕಂಡವರು ಎಂಬ ಉಲ್ಲೇಖಗಳಿವೆ. ಅಲ್ಲದೇ ವಾಲ್ಮೀಕಿ ರಾಮಾಯಣ ಮೊದಲು 6 ಕಾಂಡಗಳನ್ನು ಒಳಗೊಂಡಿತ್ತು. ಅವುಗಳೆಂದರೆ ಬಾಲ ಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂಧಾ ಕಾಂಡ, ಸುಂದರ ಕಾಂಡ ಮತ್ತು ಯುದ್ಧ ಕಾಂಡ. 7ನೇ ಕಾಂಡವಾದ ಉತ್ತರ ಕಾಂಡವನ್ನು ಬುದ್ಧ ಯುಗದಲ್ಲಿ ಸೇರಿಸಲಾಯಿತು.

ಕಳೆದ 2500 ವರ್ಷಗಳಲ್ಲಿ ರಾಮಾಯಣದ ಮಹತ್ವ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹರಡುತ್ತ ಹೋದಂತೆ, ಅದರ ಪ್ರಭಾವವು ಹೆಚ್ಚಾಗುತ್ತ ಹೋಯಿತು. ಇದೀಗ ಕನ್ನಡ, ತಮಿಳು, ತೆಲುಗು, ಸಂಸ್ಕೃತ, ಅನ್ನಾಮಿ, ಬಾಲಿ, ಬೆಂಗಾಲಿ, ಕಾಂಬೋಡಿಯನ್, ಚೈನೀಸ್, ಗುಜರಾತಿ, ಜಾವಾನೀಸ್, ಕಾಶ್ಮೀರಿ, ಖೋಟಾನಿ, ಮಲೇಷಿಯನ್, ಮರಾಠಿ, ಒಡಿಶಿ, ಪ್ರಾಕೃತ, ಸಂತಾಲಿ, ಸಿಂಹಳೀಸ್, ಥಾಯ್, ಟಿಬೆಟಿಯನ್ ಸೇರಿದಂತೆ ಲೆಕ್ಕವಿಲ್ಲದಷ್ಟು ಭಾಷೆಯಲ್ಲಿ ಅನೇಕ ರಾಮಾಯಣಗಳು ರಚನೆಯಾಗಿವೆ.

ಕನ್ನಡದಲ್ಲಿಯೇ ಅಭಿನವ ಪಂಪ ಎಂದೇ ಖ್ಯಾತನಾದ ನಾಗಚಂದ್ರನು “ರಾಮಚಂದ್ರ ಚರಿತಾಪುರಾಣ” ಬರೆದಿದ್ದಾನೆ. ಇದು ವಿದ್ವತ್ ವಲಯದಲ್ಲಿ “ಪಂಪ ರಾಮಾಯಣ” ಎಂದೇ ಪ್ರಸಿದ್ಧವಾಗಿದೆ. ಕುಮಾರ ವಾಲ್ಮೀಕಿ ಎಂದೇ ಖ್ಯಾತನಾದ ನರಹರಿ ರಚಿಸಿದ ಕೃತಿ ಎಂದರೆ “ತೊರವೆ ರಾಮಾಯಣ”. ಇದು ಗಮಕಗಳಿಗೆ ಬಳಕೆಯಾಗುವ ಷಟ್ಪದಿ ಛಂದಸ್ಸಿನ ಮತ್ತೊಂದು ಮಹತ್ವದ ಕೃತಿಯೆಂದೇ ಖ್ಯಾತಿಯಾಗಿದೆ.

ಭಾರತದಲ್ಲಿ ಪ್ರಚಲಿತದಲ್ಲಿರುವ 15 ಪ್ರಮುಖ ರಾಮಾಯಣಗಳನ್ನು ನೋಡುವುದಾದರೆ,

1. ವಾಲ್ಮೀಕಿ ರಾಮಾಯಣ
2. ತುಳಸಿದಾಸರ ರಾಮಚರಿತಮಾನಸ
3. ಕುಮಾರದಾಸರ ಜಾನಕಿ ಹರಣ
4. ಅಧ್ಯಾತ್ಮ ರಾಮಾಯಣ
5. ಆನಂದ ರಾಮಾಯಣ
6. ಅದ್ಭುತ ರಾಮಾಯಣ
7. ರಾಮಜಾತಕ
8. ಭಾನುಭಕ್ತನ ರಾಮಾಯಣ
9. ದಶರಥ ಕಥನಮ್
10. ತೊರವೆ ರಾಮಾಯಣ
11. ರಂಗನಾಥ ರಾಮಾಯಣ
12. ಪಂಪ ರಾಮಾಯಣ
13. ಖೋಟಾನಿ ರಾಮಾಯಣ
14. ಶೇಖ್ ಸಾದಿ ಅವರ ದಾಸ್ತಾನ್-ಎ-ರಾಮ್-ಓ-ಸೀತಾ

You might also like
Leave A Reply

Your email address will not be published.